ಎಂಗೆಲನ ಸೂತ್ರ

	ಒಬ್ಬ ವ್ಯಕ್ತಿಯ ವರಮಾನ ಎಷ್ಟು ಕಡಿಮೆಯೋ ಆಹಾರದ ಮೇಲೆ ಆತ ಮಾಡುವ ಖರ್ಚಿನ ಪ್ರಮಾಣ ಅಷ್ಟೆ ಅಧಿಕ- ಎಂಬ ಸೂತ್ರ (ಎಂಗೆಲ್ಸ್ ಲಾ). ಹತ್ತೊಂಬತ್ತನೆಯ ಶತಮಾನದಲ್ಲಿ ಜೀವಿಸಿದ್ದ ಜರ್ಮನ್ ಅರ್ಥಶಾಸ್ತ್ರಜ್ಞ ಎಂಗೆಲ್ ಇದರ ಪ್ರತಿಪಾದಕನಾದ್ದರಿಂದ ಇದಕ್ಕೆ ಈ ಹೆಸರು ಬಂದಿದೆ.			 (ನೋಡಿ- ಎಂಗೆಲ್,-ಎನ್ಸ್ರ್ಟ್)

	ಜನ ತಮ್ಮ ವರಮಾನವನ್ನು ಹೇಗೆ ವಿನಿಯೋಗಿಸುತ್ತಾರೆಂಬುದು ಅರ್ಥಶಾಸ್ತ್ರದ ಒಂದು ಮುಖ್ಯ ಅಧ್ಯಯನ ವಿಷಯ. ವೆಚ್ಚ ಹಾಗೂ ಉಳಿತಾಯಗಳ ನಡುವೆ ವರಮಾನ ಹೇಗೆ ಹಂಚಿಕೆಯಾಗುವುದೆಂಬುದೂ ಜೀವನದ ಅಗತ್ಯಗಳು, ಸೌಕರ್ಯಗಳು ಹಾಗೂ ಭೋಗಸಾಧನಗಳಿಗಾಗಿ ಜನ ಯಾವ ಯಾವ ಪ್ರಮಾಣಗಳಲ್ಲಿ ಖರ್ಚು ಮಾಡುವರೆಂಬುದೂ ಅನೇಕ ಆರ್ಥಿಕ ಸಮಸ್ಯೆಗಳ ಪರಿಶೀಲನೆಗೆ ಮುಖ್ಯವಾಗಿವೆ. ಈ ವರಮಾನ ವಿನಿಯೋಗದ ಬಗ್ಗೆ ವ್ಯಕ್ತಿ-ವ್ಯಕ್ತಿಗೂ ವಿವಿಧ ವರಮಾನಗಳ ಗುಂಪುಗಳಿಗೂ ನಡುವೆ ವ್ಯತ್ಯಾಸವಿರುವುದು ಸ್ವಾಭಾವಿಕವಾದರೂ ಒಟ್ಟಿನಲ್ಲಿ ಒಂದು ಸಾರ್ವತ್ರಿಕ ಸ್ವಭಾವವನ್ನು ಗುರುತಿಸಿ ಅನುಭೋಗಿಗಳ ವರಮಾನ ಹಂಚಿಕೆಯನ್ನು ಕುರಿತ ಸಾಮಾನ್ಯ ಸೂತ್ರ ರಚಿಸಲು ಅನೇಕರು ಯತ್ನ ನಡೆಸಿದ್ದಾರೆ. ಇವುಗಳ ಪೈಕಿ ಎನ್ಸ್ರ್ಟ್ ಎಂಗೆಲ್ ಕೈಕೊಂಡ ಕುಟುಂಬ ವೆಚ್ಚದ ಪರಿಶೀಲನೆಯೂ ಇದರ ಆಧಾರದ ಮೇಲೆ ಈತ ನಿರೂಪಿಸಿರುವ ಸೂತ್ರವೂ ಹೆಚ್ಚು ಪ್ರಸಿದ್ಧವಾಗಿವೆ.

	ಸ್ಯಾಕ್ಸನಿ ಎಂಬಲ್ಲಿನ ಕೆಳ, ಕಾರ್ಮಿಕ ಹಾಗೂ ಮಧ್ಯಮ ವರ್ಗಗಳ ಸಂಸಾರಗಳ ಖರ್ಚುಗಳ ಬಗ್ಗೆ 1857ರಲ್ಲಿ ಎಂಗೆಲ್ ನಡೆಸಿದ ಪರಿಶೀಲನೆಯ ಆಧಾರದ ಮೇಲೆ ಈತ ರಚಿಸಿರುವ ಕೋಷ್ಟಕವನ್ನು ಮುಂದೆ ಕೊಟ್ಟಿದೆ: 

    ಖರ್ಚಿನ ಬಾಬ್ತು   ಕುಟುಂಬದ ಒಟ್ಟು ವೆಚ್ಚದಲ್ಲಿ ನಾನಾ ಬಾಬ್ತುಗಳ ಖರ್ಚುಗಳ ಪ್ರಮಾಣ    45 l - 60 l ವರಮಾನ ಇರುವ ಕಾರ್ಮಿಕ ಕುಟುಂಬ   90 l - 120 l ವರಮಾನ ಇರುವ ಕಾರ್ಮಿಕ ಕುಟುಂಬ   150 l - 200 l ವರಮಾನ ಇರುವ ಮಧ್ಯಮವರ್ಗದ ಕುಟುಂಬ 1. ಆಹಾರ ಮಾತ್ರ   62.0%   55.0%   50.0% 2. ಉಡುಗೆ   16.0%   18.0%   18.0% 3. ವಸತಿ   12.0%   12.0%   12.0% 4. ದೀಪ ಮತ್ತು ಇಂಧನ   5.0%   5.0%   5.0% 5. ವಿದ್ಯಾಭ್ಯಾಸ   2.0%   3.5%   5.5%  6. ಕಾನೂನಿನ ರಕ್ಷಣೆ ಹಾಗೂ ನ್ಯಾಯಾಲಯ ಖರ್ಚು   1.0 %  2.0%  3.0% 7. ಆರೋಗ್ಯ ರಕ್ಷಣೆ  1.0%  2.0%  3.0%   8. ಸೌಕರ್ಯಗಳು ಮತ್ತು ವಿಹಾರ    1.0%   2.5  3.5% ಒಟ್ಟು (ಶೇಕಡ   100.0   100.0   100.0

	ಈ ಅಂಕಿಗಳ ಆಧಾರದ ಮೇಲೆ ಎಂಗೆಲ್ ಈ ಕೆಲವು ಸಾಮಾನ್ಯ ಪ್ರವೃತ್ತಿಗಳನ್ನು ನಿರೂಪಿಸಿದ್ದಾನೆ: 
	1. ವರಮಾನದ ಮಟ್ಟ ಕಡಿಮೆಯಿರುವಾಗ ಒಟ್ಟು ವೆಚ್ಚದಲ್ಲಿ ಆಹಾರದ ಖರ್ಚಿನ ಪ್ರಮಾಣವೇ ಅಧಿಕ. 
	2. ವರಮಾನ ಹೆಚ್ಚಿದಂತೆ ಆಹಾರದ ಖರ್ಚಿನ ಪ್ರಮಾಣ ಇಳಿಯುತ್ತಲು ಆರೋಗ್ಯ. ವಿದ್ಯಾಭ್ಯಾಸ ಮತ್ತು ಇತರ ಸೇವೆಗಳ ಬಗ್ಗೆ ಮಾಡುವ ಖರ್ಚಿನ ಪ್ರಮಾಣ ಏರುತ್ತಲೂ ಸಾಗುತ್ತವೆ.
	3. ಉಡುಗೆ, ಬಾಡಿಗೆ, ಇಂಧನ, ದೀಪ ಇವುಗಳ ಮೇಲಿನ ಖರ್ಚಿನ ಪ್ರಮಾಣ ಎಲ್ಲ ವರಮಾನ ಮಟ್ಟಗಳಲ್ಲೂ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ.

	ಈ ಸೂತ್ರ ವಾಸ್ತವಸ್ಥಿತಿಗೆ ಅನುಗುಣವಾಗಿಯೇ ಇದೆಯೆಂದು ಹೇಳಬಹುದು. ಹೆಚ್ಚು ವರಮಾನವುಳ್ಳ ಸಿರಿವಂತರು ಜೀವನಾಗತ್ಯಗಳ ಮೇಲೆ ಮಾಡುವ ವೆಚ್ಚ ಕಡಿಮೆ ವರಮಾನವಿರುವ ಬಡವರು ಮಾಡುವ ವೆಚ್ಚಕ್ಕಿಂತ ಹೆಚ್ಚಾಗಿರಬಹುದಾದರೂ ಅವರವರ ಒಟ್ಟು ವರಮಾನಗಳಲ್ಲಿ ಇವಕ್ಕಾಗಿ ಬಡವರು ಮಾಡುವ ವೆಚ್ಚದ ಪ್ರಮಾಣ ಸಿರಿವಂತರ ವೆಚ್ಚದ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ.

	ಅನುಭೋಗ ಪ್ರವೃತ್ತಿಯನ್ನು ಕುರಿತ ಪ್ರಥಮ ಶಾಸ್ತ್ರೀಯ ಅಧ್ಯಯನವೆಂದು ಹೇಳಬಹುದಾದ ಈ ಅಧ್ಯಯನದ ತರುವಾಯ ಅನೇಕರು ಕೈಕೊಂಡಿರುವ ಅಧ್ಯಯನಗಳಿಗೆ ಇದು ಒಂದು ಮಾದರಿಯಾಗಿದೆ. ಇವೆಲ್ಲವೂ ಎಂಗೆಲನ ತೀರ್ಮಾನಗಳನ್ನೆ ಪುಷ್ಟೀಕರಿಸುತ್ತವೆ. ಅದರಿಂದಾಗಿ ಎಂಗೆಲನ ಸೂತ್ರಕ್ಕೆ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಮಾನ್ಯತೆಯುಂಟು.		
					 							(ಎ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ